ಪ್ರತಿ ವರ್ಷದಂತೆ, ಬೆಂಗಳೂರಿನಲ್ಲಿ ಈ ಬಾರಿಯೂ ಎರಡು ಕಡಲೆಕಾಯಿ ಪರಿಷೆಗಳು ಒಂದರ ಹಿಂದೊಂದರಂತೆ ನಡೆಯಲಿವೆ. ಮೊದಲನೆಯದಾಗಿ, ನ. 8ರಿಂದ 10ರವರೆಗೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನಡೆದರೆ, ನ. 17ರಿಂದ 21ರವರೆಗೆ ಐತಿಹಾಸಿಕವಾದ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ. ಇವುಗಳಲ್ಲಿ ಯಾವ ಪರಿಷೆ ಇದೇ ಮೊದಲ ಬಾರಿಗೆ 5 ದಿನಗಳವರೆಗೆ ನಡೆಯಲಿದೆ, ಈ ಬಾರಿಯ ಕಡಲೆ ಪರಿಷೆಗಳಿಗಾಗಿ ಸರ್ಕಾರ ನೀಡಿರುವ ವಿಶೇಷವಾದ ಮಾರ್ಗಸೂಚಿಯೊಂದಿದ್ದು ಅದು ಏನು ಎಂಬುದರ ಮಾಹಿತಿ ಇಲ್ಲಿದೆ.
ಹೈಲೈಟ್ಸ್:
- ಬೆಂಗಳೂರಿನಲ್ಲಿ ಇದೇ ನವೆಂಬರ್ ನಲ್ಲಿ ನಡೆಯಲಿವೆ ಎರಡು ಕಡಲೆಕಾಯಿ ಪರಿಷೆ.
- ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನ. 7-10ರವರೆಗೆ; ಬಸವನಗುಡಿ ಪರಿಷೆ 17ರಿಂದ 21ರವರೆಗೆ.
- ಇಲ್ಲಿ ಸರ್ಕಾರದ ವಿಶೇಷ ಮಾರ್ಗಸೂಚಿಯೊಂದಿದ್ದು ಪರಿಷೆಗೆ ಹೋಗುವವರು ಮರೆಯದೇ ಗಮನಿಸಬೇಕು, ಏನದು ಇಲ್ಲಿದೆ ನೋಡಿ.

ಮೊದಲು ನಡೆಯೋದು ಮಲ್ಲೇಶ್ವರ ಪರಿಷೆ
ಮಲ್ಲೇಶ್ವರಂನಲ್ಲಿರುವ ಐತಿಹಾಸಿಕ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಪ್ರತಿ ವರ್ಷ ಜರುಗುವ ಪರಿಷೆಯನ್ನೇ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಎಂದು ಕರೆಯುತ್ತಾರೆ. ನ. 8ರ ಸಂಜೆ 5 ಗಂಟೆಗೆ ಈ ಪರಿಷೆಯ ಉದ್ಘಾಟನೆಯಾಗುತ್ತದೆ. ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ಕನ್ನಡ ಸಿನಿರಂಗದ ಕೆಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಬಸವನಗುಡಿ ಪರಿಷೆಯು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿತ್ತು.
ಬಸನಗುಡಿ ಪರಿಷೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಮಲ್ಲೇಶ್ವರಂ ಪರಿಷೆ ಮುಗಿದ ವಾರದೊಳಗೆ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯು ನ. 17 ರಂದು ಆರಂಭವಾಗಿ 5 ದಿನಗಳ ಕಾಲ ನಡೆಯಲಿದೆ. ಇದೇ ಮೊದಲ ಬಾರಿಗೆ ಬಸವನಗುಡಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಲಾಗಿದೆ. ನ. 17ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಕಳೆದ ವರ್ಷ ಸುಮಾರು 5 ಲಕ್ಷ ಜನರು ಪರಿಷೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಗಮನಿಸಬೇಕಾದ ಅಂಶ
ಈ ಬಾರಿಯ ಮಲ್ಲೇಶ್ವರಂ ಮತ್ತು ಬಸವನಗುಡಿ ಪರಿಷೆಗಳನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ. ಹಾಗಾಗಿ, ಪರಿಷೆಗಳಿಗೆ ಬರುವವರು ಮನೆಗಳಿಂದಲೇ ಬಟ್ಟೆಯ ಹಾಗೂ ಇನ್ನಿತರ ಪರಿಸರಸ್ನೇಹಿ ಕೈ ಚೀಲಗಳನ್ನು ಕೊಂಡೊಯ್ಯಬೇಕಿದೆ. ಇಲ್ಲವೇ, ಪರಿಷೆಗಳಲ್ಲೇ ಸಿಗುವ ವಿವಿಧ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಖರೀದಿ ಮಾಡಿ ಅದರಲ್ಲಿ ಕಡಲೆಕಾಯಿ ಅಥವಾ ಕಡಲೆ ಆಧಾರಿತ ತಿನಿಸುಗಳನ್ನು ಖರೀದಿಸಿ ಮನೆಗೊಯ್ಯಬಹುದು. ಆದರೆ, ಪರಿಷೆಯಲ್ಲಿ ಸಿಗುವ ಪರಿಸರ ಸ್ನೇಹಿ ಬ್ಯಾಗುಗಳು ದುಬಾರಿ ಇರಬಹುದು. ಗ್ರಾಹಕರು ಈ ಬಗ್ಗೆ ಗಮನ ಹರಿಸಬೇಕು.
ಕ್ಯಾಮೆರಾ ಕಣ್ಣಲ್ಲಿ ಬಸವನಗುಡಿ ಕಡಲೆಕಾಯಿ ಪರಿಷೆ
ಪೂರ್ವ ಸಿದ್ಧತೆ
ಸುರಕ್ಷತೆಯ ದೃಷ್ಟಿಯಿಂದ ಪರಿಷೆಗಳು ನಡೆಯುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗುತ್ತಿದೆ. ಅಗ್ನಿಶಾಮಕ ವಾಹನ, ತುರ್ತು ಚಿಕಿತ್ಸಾ ವಾಹನ ಮತ್ತು ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತಿದೆ. ಮತ್ತೊಂದೆಡೆ, ನಾಗರಿಕ ಸೇವಾ ಇಲಾಖೆಗಳಿಂದ ಪರಿಷೆ ನಡೆಯುವ ಸ್ಥಳಗಳಲ್ಲಿ ನಿರಂತರ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬೀದಿ ದೀಪಗಳನ್ನು ಅಳವಡಿಸಿ, ದುರಸ್ತಿ ಮಾಡಲಾಗಿದೆ. ಆರೋಗ್ಯ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಬಸವನಗುಡಿಯಲ್ಲೇ ಕಡಲೆಕಾಯಿ ಪರಿಷೆ ಏಕೆ?
ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಈ ಪರಿಷೆಯನ್ನು ಆಯೋಜಿಸಲು ಇರುವ ಐತಿಹಾಸಿಕ ಕಾರಣವೇನು ಮತ್ತು ಈ ವಿಶಿಷ್ಟ ಕಡಲೆಕಾಯಿ ಪರಿಷೆಗೂ ಬಸವನಗುಡಿಯಲ್ಲಿರುವ ದೊಡ್ಡ ಬಸವನಿಗೂ ಇರುವ ಸಂಬಂಧವೇನು ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಇದೇನೆಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.




